ಅನುಪಮಾ ನಿರಂಜನ
  	
1934 - 1991.  ಕನ್ನಡದ ಖ್ಯಾತ ಲೇಖಕಿ.  ವೃತ್ತಿಯಿಂದ ವೈದ್ಯರಾದ ಅನುಪಮ ವೈದ್ಯ ಸಾಹಿತ್ಯದಲ್ಲೂ ವಿಶಿಷ್ಟ ಛಾಪು ಮೂಡಿಸಿದವರು. ಜನಪರ ಕಾಳಜಿಯ, ಸಂವೇದನಾಶೀಲ ಬರಹಗಾರರು ಮತ್ತು ಹೋರಾಟಗಾರರು.  ತಂದೆ ಶಿವರಾಮಯ್ಯ ತಾಯಿ ಲಕ್ಷ್ಮಿದೇವಮ್ಮ ಹುಟ್ಟಿದ್ದು  ಮೇ 17, 1934. ಹುಟ್ಟಿನ ಹೆಸರು ವೆಂಕಟಲಕ್ಷ್ಮಿ. ಶಿವರಾಮಯ್ಯನವರಿಗೆ ಏಳು ಮಕ್ಕಳು. ನಾಲ್ಕು ಗಂಡು. ಮೂರು ಹೆಣ್ಣು ಅನುಪಮಾ ದೊಡ್ಡವರು. ಬಡತನದಲ್ಲೇ ಬೆಳೆದು ಓದಿ ವೈದ್ಯರಾದ ಅನುಪಮ ದಿಟ್ಟತನಕ್ಕೆ ಮತ್ತೊಂದು ಹೆಸರು.  ಮೈಸೂರಿನಲ್ಲಿ ವೈದ್ಯ ವಿದ್ಯಾಭ್ಯಾಸ ಮುಗಿಸಿದ ಅನುಪಮ, ಲೇಖಕ ಹಾಗೂ ಎಡ ಪಂಥೀಯ ಚಿಂತಕ ನಿರಂಜನರನ್ನು ಅವರ ಎಡಪಂಥೀಯ ನಿಲುವಿಗಾಗಿಯೇ ಮೆಚ್ಚಿ ಅಂರ್ತಜಾತೀಯ ವಿವಾಹವಾದರು. ತೇಜಸ್ವಿನಿ, ಸೀಮಂತಿನಿ  ಇಬ್ಬರು ಹೆಣ್ಣು ಮಕ್ಕಳು. ಮೊದಲು ತಮ್ಮದೇ ಒಂದು ಹೆರಿಗೆ ಆಸ್ಪತ್ರೆ ನಡೆಸಿದ ಅನುಪಮ, ಅನಂತರ ತಮ್ಮ ನೆಲೆಯನ್ನು ಬೆಂಗಳೂರಿಗೆ ಬದಲಾಯಿಸಿದ ಮೇಲೆ ತಮ್ಮ ಸೇವೆಯನ್ನು ಒಂದು ಚಿಕಿತ್ಸಾಲಯಕ್ಕೆ ಸೀಮಿತಗೊಳಿಸಿಕೊಂಡರು. ಕಡಿಮೆ ಸಮಯದಲ್ಲೇ ಒಳ್ಳೆಯ ವೈದ್ಯರೆಂದು ಹೆಸರು ಮಾಡಿದ ಅನುಪಮ, ಸುಧಾ ಪತ್ರಿಕೆಯಲ್ಲಿ ವೈದ್ಯಕೀಯ ಪ್ರಶ್ನೋತ್ತರ ಅಂಕಣ ನಡೆಸಿದರು.
	
ಕಾಲೇಜಿನಲ್ಲಿದ್ದಾಗಲೇ ಕಾದಂಬರಿ ಪ್ರಕಟಿಸಿದ್ದ, ಅನುಪಮ ಮುಂದೆ ವೈದ್ಯರಾದ ಮೇಲೆ ವೈದ್ಯಕೀಯ ಸಾಹಿತ್ಯಕ್ಕೂ ಕೈಹಾಕಿ ಯಶಸ್ವೀ ವೈದ್ಯಲೇಖಕಿಯಾದರು. ಜನರಲ್ಲಿನ ಹೆರಿಗೆ ಮತ್ತು ಸ್ತ್ರೀ ರೋಗಗಳ ಬಗ್ಗೆ ಜನಸಾಮಾನ್ಯರಲ್ಲಿದ್ದ ಮೂಢನಂಬಿಕೆಗಳನ್ನು ಕಂಡು ಮನನೊಂದಿದ್ದ ಅವರು ಸ್ತ್ರೀ ಸ್ವಾಸ್ಥ್ಯ ಸಂಹಿತೆ, ತಾಯಿ - ಮಗು, ಕೇಳೆ ಕಿಶೋರಿ, ದಾಂಪತ್ಯ ದೀಪಿಕೆ ಮುಂತಾದ ಅನೇಕ ಜನಪ್ರಿಯ ವೈದ್ಯಕೀಯ ಪುಸ್ತಕಗಳನ್ನು ಬರೆದರು. ಇವುಗಳಲ್ಲಿ ಕೆಲವು ಇಪ್ಪತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿದೆ.  ಮೂಢನಂಬಿಕೆಗಳ ವಿರುದ್ಧದ ಇವರ ಹೋರಾಟ ನಡೆಸಿದವರು. ಬೆಂಗಳೂರು ವಿಶ್ವವಿದ್ಯಾನಿಲಯ ರಚಿಸಿದ ಮೂಢನಂಬಿಕೆ ಮತ್ತು  ಪವಾಡಗಳ ವೈಜ್ಞಾನಿಕ ಪರಿಶೀಲನಾ ಸಮಿತಿಯ ಸದಸ್ಯರಾಗಿದ್ದರು.
	
ಸಾಹಿತಿಯಾಗಿಯೂ ಅನುಪಮಾ ದೊಡ್ಡ ಯಶಸ್ಸು ಕಂಡವರು. ಲೇಖಕಿಯರ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಮಹಿಳಾ ಚಳುವಳಿಗಳಲ್ಲಿಯೂ ಇವರದು ಸಕ್ರಿಯ ಪಾತ್ರ. ಸ್ತ್ರೀವಾದಿ ಚಿಂತನೆಗಳಂತೆ ಕಂಡುಬರುವ ಅವರ ವಿಚಾರಗಳು ನಿಜವಾಗಿ ಮಾನವ ಸಮಾನತೆಯ ಚಿಂತನೆಗಳು. ಅವರ ಸಾಹಿತ್ಯ ಕೃಷಿ 25 ಕಾದಂಬರಿಗಳು, 8 ಕಥಾಸಂಕಲನ, 2 ಆತ್ಮಚರಿತ್ರೆ ಕಥನ, 1 ಶಿಶುಸಾಹಿತ್ಯ, 11 ವೈದ್ಯಕೀಯ ಸಾಹಿತ್ಯ, 2 ಪ್ರವಾಸ ಕವನಗಳು, ವನಿತಾವಾಣಿ-2 ಪುಸ್ತಕಗಳಿಗೆ ಹರಡಿಕೊಂಡಿವೆ. ಅವರ ಕೊನೆಯ ಕಾದಂಬರಿ ದಿಟ್ಟ-ಅಪೂರ್ಣವಾಗಿತ್ತು. ಅದನ್ನು ಶ್ರೀಮತಿ ಡಿ.ಎನ್.ನಂದಾರವರು ಪೂರ್ಣಗೊಳಿಸಿದರು. ರಾಣಿ ಅಬ್ಬಕ್ಕನ ಜೀವನ ಚರಿತ್ರೆ ಆಧರಿಸಿದ ಕಾದಂಬರಿಯಿದು.  ತಮ್ಮ ಜೀವನದ ಸಿಹಿ ಕಹಿಗಳನ್ನು "ನೆನಪು: ಸಿಹಿ-ಕಹಿ" ಎಂಬ ಆತ್ಮಕತೆಯಲ್ಲಿ ನಿರೂಪಿಸಿದ್ದಾರೆ.  ಇದನ್ನು ವಿಮರ್ಶಿಸಿದ ಡಾ. ಹಾ.ಮಾ.ನಾಯಕರು". ಇದರಲ್ಲಿ ಅನುಮಮಾ ತಮ್ಮ ಬರಹಗಾರ್ತಿಯ ಬದುಕಿನ ಬಗ್ಗೆ ಹೇಳುವುದಿಲ್ಲ. ಅದರ ಬಗ್ಗೆ ಅವರ ಇನ್ನೊಂದು ಪುಸ್ತಕವನ್ನೇ ರಚಿಸಬಹುದು" ಎಂದಿದ್ದನ್ನು ಅನುಸರಿಸಿ, ಅದೇ ಹೆಸರಿನ ಪುಸ್ತಕವನ್ನು ಬರೆದರು.
	
ಸಾಮಾಜಿಕವಾಗಿ ದಿಟ್ಟ ಹೋರಾಟ ನಡೆಸಿದ ಡಾ. ಅನುಪಮಾ ನಿರಂಜನ ತಮ್ಮ ಜೀವನದಲ್ಲೂ ಹೋರಾಟವನ್ನು ನಡೆಸಬೇಕಾಯಿತು. ಎರಡು ಬಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಅದನ್ನೆದುರಿಸಿದ ಪರಿ ಇತರ ರೋಗಿಗಳಿಗೆ ದಾರಿದೀಪ. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ಜಗತ್ತು ಎಂಬ ಪುಸ್ತಕವನ್ನು ಬರೆದರು. 1991ರಲ್ಲಿ ನಿಧನರಾದ ಅನುಪಮಾ ನಾಡಿನ ಗಣ್ಯರಲ್ಲೊಬ್ಬರಾಗಿದ್ದರು.
		
(ಡಾ. ವಸುಂಧರಾ ಭೂಪತಿ)
(ಪರಿಷ್ಕರಣೆ: ಕೆ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ